ಭಾರತದಲ್ಲಿ ಅಲ್ಯೂಮಿನಿಯಮ್ ಉದ್ಯಮ

	ಭಾರತದಲ್ಲಿ ಪ್ಲಾಸ್ಟಿಕ್ಕಿಗಿಂತಲೂ ಅಲ್ಯೂಮಿನಿಯಮ್ಮಿನ ಬಳಕೆಯೇ ಹೆಚ್ಚು. ಕಬ್ಬಿಣೇತರ ಲೋಹಗಳಾದ ತಾಮ್ರ, ಸೀಸ, ಸತುವು ಇತ್ಯಾದಿಗಳ ತೀವ್ರಕೊರತೆ ಮತ್ತು ಅಲ್ಯೂಮಿನಿಯಮ್ಮಿನ ಅದುರಾದ ಬಾಕ್ಸೈಟಿನ ಅಧಿಕ ಲಭ್ಯತೆ ಇವುಗಳಿಂದಾಗಿ ಈ ಲೋಹ ದೇಶದ ಆರ್ಥಿಕ ಬೆಳೆವಣಿಗೆಯಲ್ಲಿ ವಿಶಿಷ್ಟ ಪಾತ್ರ ವಹಿಸಿದೆ.

	ಭಾರತದಲ್ಲಿ ಅಲ್ಯೂಮಿನಿಯಮ್ ಉದ್ದಿಮೆಯ ಉಗಮ ಸುಮಾರು 1920ರ ದಶಕದಲ್ಲಿ ಆಯಿತೆನ್ನಬಹುದು. ಆಗ ಹೊರಗಿನಿಂದ ಆಮದು ಮಾಡಿ ತಂದ ಲೋಹ ಉಪಯೋಗಿಸಿ ಮುಖ್ಯವಾಗಿ ಪಾತ್ರೆ ತಯಾರಿಸುತ್ತಿದ್ದರು. ಆದರೆ ಮೂಲತಃ ಅಲ್ಯೂಮಿನಿಯಮ್ ತಯಾರಿಕೆಯನ್ನು ಪರಿಗಣಿಸಿದರೆ ಈ ಉದ್ದಿಮೆ ಸುಮಾರು 1940ರ ಹಿಂಚುಮುಂಚಿನಲ್ಲಿ ಆಯಿತೆನ್ನಬಹುದು. ಕ್ರಿ.ಶ 1938ರಲ್ಲಿ ಮೊಟ್ಟಮೊದಲಿಗೆ ಬಾರಿಗೆ ರಾಷ್ಟ್ರದಲ್ಲಿ ಅಲ್ಯೂಮಿನಿಯಂ ಉತ್ಪಾದಿಸಲಾಯಿತು. 1940-50ರ ದಶಕವನ್ನು ಭಾರತದಲ್ಲಿ ಅಲ್ಯೂಮಿನಿಯಮ್ ಉದ್ದಿಮೆಯ ಬೆಳೆವಣಿಗೆಯ ಮೊದಲ ಹಂತವೆಂದು ಕರೆಯಬಹುದು. 1938ರಲ್ಲಿ ಅಲ್ಯೂಮಿನಿಯಮ್ ಪ್ರೊಡಕ್ಷನ್ ಕಂಪನಿ ಆಫ್ ಇಂಡಿಯಾ ಎಂದು ಖಾಸಗೀ ಕ್ಷೇತ್ರದಲ್ಲಿ ಆರಂಭವಾದ ಸಂಸ್ಥೆಯೇ ದೇಶದಲ್ಲಿ ಈ ಉದ್ದಿಮೆಯ ಹುಟ್ಟು ಮತ್ತು ಬೆಳೆವಣಿಗೆಗೆ ಬಹಳಷ್ಟು ಕೆಲಸಮಾಡಿತು. ಇದೇ ಇಂದಿನ ಇಂಡಿಯನ್ ಅಲ್ಯೂಮಿನಿಯಮ್ ಕಂಪನಿಯ ಪೂರ್ವಜ. ಇದು ಆಲೂಪುರಂ ರಿಡಕ್ಷನ್ ಕಾರ್ನೂಗಾರದ ಮೂಲಕ ಅಲ್ಯೂಮಿನಿಯಂ ಉತ್ಪಾದಿಸಲಾಯಿತು. ಆಮದು ಮಾಡಿಕೊಂಡ ಲೋಹವನ್ನು ತಗಡು ಮಾಡುವ ಕಾರ್ಖಾನೆ ಕಲ್ಕತ್ತಾದ ಹತ್ತಿರವಿರುವ ಬೇಲೂರಿನಲ್ಲಿ ಮೊದಲು ಆರಂಭವಾಯಿತು (1939). ಮುಂದೆ ಆಮದಾದ ಅಲ್ಯೂಮಿನಾದಿಂದ ಅಲ್ಯೂಮಿನಿಯಮ್ ಲೋಹ ತಯಾರಿಸುವ ಸ್ಮೆಲ್ಟರ್ ಕೇರಳದಲ್ಲಿ ಕಾರ್ಯಪ್ರವೃತ್ತವಾಯಿತು (1943). ಬಾಕ್ಸೈಟ್ ಅದುರಿನಿಂದ ದೇಶದಲ್ಲಿಯೇ ಅಲ್ಯೂಮಿನಾ ತಯಾರಿಸಲು ಬಿಹಾರದ `ಮುರಿ' ಎಂಬಲ್ಲಿ ಇದೇ ಕಂಪನಿ ಇನ್ನೊಂದು ಶಾಖೆ ತೆರೆಯಿತು (1948). ಇದೇ ಕಂಪನಿ ಹಿರಾಕುಡ್ಡಿನಲ್ಲಿ (ಒರಿಸ್ಸಾ) ಇನ್ನೊಂದು ಸ್ಮೆಲ್ಟರನ್ನೂ (1959) ಬೆಳಗಾವಿಯಲ್ಲಿ ಅಲ್ಯೂಮಿನಾ ಮತ್ತು ಸ್ಮೆಲ್ಟರ್ ಎರಡನ್ನೂ (1969) ಪ್ರವರ್ತಿಸಿತು.

	ಹಿಂದೂಸ್ಥಾನ್ ಅಲ್ಯೂಮಿನಿಯಮ್ ಕಾರ್ಪೊರೇಶನ್ ಎಂಬ ಸಂಸ್ಥೆ ಉತ್ತರ ಪ್ರದೇಶದ `ರೇಣುಕೂಟ್ ಎಂಬಲ್ಲಿಯೂ (1962) ಮದ್ರಾಸ್ ಅಲ್ಯೂಮಿನಿಯಮ್ ಕಂಪನಿ ತಮಿಳುನಾಡಿನ `ಮೆಟ್ಟೂರು ಎಂಬಲ್ಲಿಯೂ (1965) ತಮ್ಮ ಕಾರ್ಖಾನೆಗಳನ್ನು ಸ್ಥಾಪಿಸಿದೆ.

ಅಲ್ಯೂಮಿನಿಯಮ್ಮಿಗೆ ಬೇಡಿಕೆ : ಮೊದಲ ಎರಡು ದಶಕಗಳಲ್ಲಿ ಅಲ್ಯೂಮಿನಿಯಮ್ ಉದ್ದಿಮೆ ಒಂದೇ ಮಟ್ಟದಲ್ಲಿ ಬೆಳೆಯದೆ ಇದ್ದಕ್ಕಿದ್ದ ಹಾಗೆ ಆಗೊಮ್ಮೆ ಈಗೊಮ್ಮೆ ಬೆಳೆಯಿತು. ಇದಕ್ಕೆ ಕಾರಣಗಳೂ ಇವೆ. 1940ರಲ್ಲಿ ಅಲ್ಯೂಮಿನಿಯಮ್ ಒಂದು ತೀರ ಹೊಸ ಉದ್ದಿಮೆಯಾಗಿತ್ತು. ಆಗ ಇದರ ಉಪಯೋಗಗಳು ಈಗಿನಷ್ಟು ಇರಲಿಲ್ಲ. ಬೇಡಿಕೆ ಖಚಿತವಾಗಿರಲಿಲ್ಲ. ಮುಂದಿನ ಬೇಡಿಕೆ ಬೆಳೆವಣಿಗೆಗಳ ಬಗ್ಗೆ ಏನೂ ಹೇಳಬರುವಂತಿರಲಿಲ್ಲ. ಕಚ್ಚಾ ಸಾಮಗ್ರಿಗಳಾಗಲಿ ವಿದ್ಯುತ್ತಾಗಲಿ ಸುಲಭವಾಗಿ ಒದಗುವುದರ ಬಗ್ಗೆ ಅನುಮಾನವಿತ್ತು. ಹೀಗಿದ್ದರೂ 1951ರಿಂದೀಚೆಗೆ ಅಲ್ಯೂಮಿನಿಯಮ್ ಲೋಹದ ಬೇಡಿಕೆ ವರ್ಷವೊಂದಕ್ಕೆ ಶೇಕಡಾ ಸರಾಸರಿ 15ರಂತೆ ಹೆಚ್ಚುತ್ತ ಬಂದಿದೆ. ಅಂದರೆ ಪ್ರತಿ ಐದು ವರ್ಷಗಳಿಗೊಮ್ಮೆ ಅದರ ಬೇಡಿಕೆ ದ್ವಿಗುಣಗೊಂಡಿದೆ ಎಂಬುದನ್ನು ಮುಂದಿನ ಅಂಕಿಅಂಶಗಳಿಂದ ತಿಳಿಯಬಹುದು.

	1951-71 ಅವಧಿಯಲ್ಲಿ ಅಲ್ಯೂಮಿನಿಯಮ್ಮಿನ ಉತ್ಪಾದನೆ ಐದು ವರ್ಷಕ್ಕೊಮ್ಮೆ ದ್ವಿಗುಣಗೊಳ್ಳುತ್ತಿತ್ತು. 1971ರ ಅನಂತರ ಬೇಡಿಕೆ ಹೆಚ್ಚುತ್ತಲೇ ಇದ್ದರೂ ಉತ್ಪಾದನೆ ಮಾತ್ರ ಕುಂಠಿತವಾಗುತ್ತಲೇ ಇದೆ. ಉತ್ಪಾದನೆ ಹೆಚ್ಚದಿರಲು ಮುಖ್ಯ ಕಾರಣ ವಿದ್ಯುತ್ತಿನ ಕೊರತೆ. 1970ರ ದಶಕದಲ್ಲಿ ದೇಶದ ಸುಮಾರು ಎಲ್ಲ ಭಾಗಗಳಲ್ಲೂ ವಿದ್ಯುತ್ ಕಡಿತ ಆರಂಭವಾಯಿತು. ಇದರಿಂದಾಗಿ ಉತ್ಪಾದನಾಸಾಮಥ್ರ್ಯದ ಉಪಯೋಗ 1970-71ರಲ್ಲಿ ಶೇಕಡಾ 108.3 ಇದ್ದುದು 1974-75ರಲ್ಲಿ ಶೇಕಡಾ 60.5ಕ್ಕೆ ಇಳಿಯಿತು ಮತ್ತು 1979-80ರಲ್ಲಿ ಶೇಕಡಾ 59.8ಕ್ಕೆ ಕುಸಿಯಿತು. ಮೇಲಿನ ಅಂಕಿಅಂಶಗಳಿಂದ ಯಾವಾಗಲೂ ಉತ್ಪಾದನೆ ಬೇಡಿಕೆಗಿಂತ ಕಡಿಮೆಯಾಗಿಯೇ ಇದೆಯೆನ್ನುವುದನ್ನು ನೋಡಬಹುದು. ಹೀಗಾಗಿ 1981-82ರ ತನಕ ಸುಮಾರು 283,500 ಟನ್ನುಗಳಷ್ಟು ಅಲ್ಯೂಮಿನಿಯಮನ್ನು ಆಮದು ಮಾಡಿಕೊಳ್ಳಲಾಗಿತ್ತು. ಇಂದಿಗೂ ಆಮದು ತಪ್ಪಿಲ್ಲ.

	ಅಲ್ಯೂಮಿನಿಯಮ್ಮಿನ ಉತ್ಪಾದನೆಯಂತೆ ಬೇಡಿಕೆಯೂ 1951ರಿಂದ 71ರ ತನಕ ಐದು ವರ್ಷಕ್ಕೊಮ್ಮೆ ದ್ವಿಗುಣಗೊಳ್ಳುತ್ತಿತ್ತು. ಅಂದರೆ ಬೇಡಿಕೆಯೂ ಶೇಕಡಾ 15ರಷ್ಟು ಹೆಚ್ಚುತ್ತಿತ್ತು. ಆದರೆ 1971ರಲ್ಲಿ ಬೇಡಿಕೆ 194,000 ಟನ್ನುಗಳಿದ್ದು 1981ರಲ್ಲಿ ಕೇವಲ 321,000 ಟನ್ನುಗಳಷ್ಟಾಗಿದೆ. ಇದೇ ರೀತಿ 1970ರಲ್ಲಿ ಉಪಯೋಗ ಪ್ರಪಂಚದ ಶೇಕಡಾ 1.6ರಷ್ಟಿದ್ದು 1980ರಲ್ಲೂ ಅಷ್ಟೇ ಇತ್ತು. ಆದ್ದರಿಂದ ಈ ದಶಕದಲ್ಲಿ ಅಲ್ಯೂಮಿನಿಯಮ್ಮಿನ ಬೇಡಿಕೆ, ಬಳಕೆ ನಿರೀಕ್ಷಿಸಿದ ಮಟ್ಟದಲ್ಲಿ ಬೆಳೆಯಲಿಲ್ಲ. ಇಲ್ಲಿಯ ತಲಾ ಬಳಕೆ ಕೇವಲ 0.5ಕಿ.ಗ್ರಾಂ. 

	ಮುಂದುವರಿದ ದೇಶಗಳಲ್ಲಿಯ ಬಳಕೆಗೆ ಹೋಲಿಸಿದರೆ ಇದು ತೀರ ಕಡಿಮೆ. ಉದಾಹರಣೆಗೆ, ಅಮೆರಿಕದಲ್ಲಿ ಈ ದರ 27, ನಾರ್ವೇಯಲ್ಲಿ 23.4, ಪಶ್ಚಿಮ ಜರ್ಮನಿಯಲ್ಲಿ 16.4, ಜಪಾನಿನಲ್ಲಿ 13, ಬ್ರಿಟನ್ನಿನಲ್ಲಿ 12.3, ಕೆನಡಾದಲ್ಲಿ 10, ಸ್ಟೇನಿನಲ್ಲಿ 7.2, ಮಲೇಷಿಯಾದಲ್ಲಿ 1.5, ಫಿಲಿಪ್ಪೀನ್ಸಿನಲ್ಲಿ 0.7, ಶ್ರೀಲಂಕಾದಲ್ಲಿ 0.6.             (ಸಿ.ಕೆ.)

	ಬಾಕ್ಸೈಟ್ ಅಲ್ಯೂಮಿನಿಯಂ ತಯಾರಿಸುವ ಅದಿರು, ಶುದ್ಧರೂಪದಲ್ಲಿ ದೊರೆಯುವುದಿಲ್ಲ. ಬಾಕ್ಸೈಟ್‍ನಿಂದ ಅಲ್ಯೂಮಿನಿಯಂ ಉತ್ಪಾದಿಸಲು ಹೆಚ್ಚು ವಿದ್ಯುಚ್ಛಶಕ್ತಿಯ ಅವಶ್ಯಕತೆ ಇದೆ. ಇದರಿಂದ ಭಾರತ ಅಪಾರ ಬಾಕ್ಸೈಟ್ ನಿಕ್ಷೇಪವನ್ನು ಹೊಂದಿದ್ದರೂ ಅಲ್ಯುಮಿನಿಯಂ ಉತ್ಪಾದನೆ ವಿದ್ಯುಚ್ಛಕ್ತಿಯನ್ನು ಅವಲಂಬಿಸಿದೆ. ಇದರಿಂದ ಭಾರತ ಅದಿರನ್ನು ಇತರ ದೇಶಗಳಿಗೆ ರಫ್ತು ಮಾಡುತ್ತವೆ. 

	ಭಾರತ ಜಗತ್ತಿನ ಶೇ10ರಷ್ಟು ಬಾಕ್ಸೈಟ್ ನಿಕ್ಷೇಪವನ್ನು ಹೊಂದಿದ್ದು ನಾಲ್ಕನೆಯ ಸ್ಥಾನದಲ್ಲಿದೆ. ಇಲ್ಲಿ ಅದಿರಿನ ಉತ್ಪಾದನೆ 25 ದಶಲಕ್ಷ ಟನ್‍ಗಳೆಂದು ಅಂದಾಜು ಮಾಡಲಾಗಿದೆ. ಇದು ಹೆಚ್ಚಾಗಿ ಆಂಧ್ರಪ್ರದೇಶ, ಮಧ್ಯಪ್ರದೇಶ, ಛತ್ತೀಸ್‍ಗಢ, ಜಾರ್ಖಂಡ್, ಬಿಹಾರ, ಮಹಾರಾಷ್ಟ್ರ, ಕರ್ನಾಟಕ, ಗುಜತಾತ್, ಗೋವಾ, ತಮಿಳುನಾಡು, ರಾಜಸ್ಥಾನ ಮತ್ತು ಜಮ್ಮೂ ಕಾಶ್ಮೀರ ರಾಜ್ಯಗಳಲ್ಲಿ ಹಂಚಿಕೆಯಾಗಿದೆ. 

	1967ರ ಅವಧಿಯಲ್ಲಿ ರಾಷ್ಟ್ರದಲ್ಲಿ ಕೇವಲ ಐದು ಅಲ್ಯೂಮಿನಿಯಂ ಕರಗಿಸಬಲ್ಲ ಸ್ಥಾವರಗಳಿದ್ದವು. ಅವು ಜೆ.ಕೆ.ನಗರ, ಆಲೂಪುರಂ, ಹಿರಾಕುಡ್, ರೇಣಕೂಟ್ ಮತ್ತು ಮೆಟ್ಟೂರುಗಳಲ್ಲಿ ಸ್ಥಾಪನೆಯಾಗಿದ್ದವು. ಹಿಂದೂಸ್ತಾನ್ ಅಲ್ಯೂಮಿನಿಯಂ ಕಾರ್ಪೊರೇಷನ್ ಲಿಮಿಟೆಡ್ (ಹಿಂಡಾಲ್ ಕೊ) ಸಂಸ್ಥೆಯು ಉತ್ತರಪ್ರದೇಶ ರಾಜ್ಯದ ಮಿರ್ಜಾಪುರ ಸಮೀಪದ ರೇಣುಕೂಟ್ ಎಂಬಲ್ಲಿ ಸ್ಥಾಪನೆಯಾಗಿದೆ. ಇಂಡಿಯನ್ ಅಲ್ಯುಮಿನಿಯಂ ಕಂಪೆನಿ (ಇಂಡಾಲ್) ಸಂಸ್ಥೆ ವಿವಿಧ ಪ್ರದೇಶಗಳಲ್ಲಿಅಲ್ಯುಮಿನಿಯಂ ಉತ್ಪಾದಿಸುವ ಮೂರು ಘಟಕಗಳನ್ನು ಹೊಂದಿದೆ. ನ್ಯಾಷನಲ್ ಅಲ್ಯುಮಿನಿಯಂ ಕಂಪೆನಿ ಲಿಮಿಟೆಡ್ ಒರಿಸ್ಸಾದಲ್ಲಿ ಸ್ಥಾಪನೆಗೊಂಡಿದ್ದು ಇದು ಭಾರತದ ಅತ್ಯಂತ ದೊಡ್ಡ ಅಲ್ಯುಮಿನಿಯಂ ಸ್ಥಾವರ ಸಂಕೀರ್ಣ. ಈ ಸ್ಥಾವರ ಸಂಕೀರ್ಣ ವರ್ಷಕ್ಕೆ 4.8ದಶಲಕ್ಷ ಟನ್‍ಗಳಷ್ಟು ಬಾಕ್ಸೈಟ್ ಲಭ್ಯವಿರುವ ಗಣಿಯನ್ನು ಕೋರಾಪಟ್ ಜಿಲ್ಲೆಯಲ್ಲಿ ಹೊಂದಿದೆ. ಇದೇ ಜಿಲ್ಲೆಯ ದಮನ್ ಜೋಡಿ ಎಂಬಲ್ಲಿ ಅಲ್ಯುಮಿನಾ ಸಂಸ್ಕರಣ ಕೇಂದ್ರ ಹೊಂದಿದ್ದು ಇಲ್ಲಿ ವರ್ಷಕ್ಕೆ 1575 ಮೆಟ್ರಿಕ್‍ಟನ್ ಉತ್ಪಾದನೆ ಇದೆ. ಅಂಗುಲ್ ಜಿಲ್ಲೆಯ ಅಂಗುಲ್ ಎಂಬಲ್ಲಿ ವರ್ಷಕ್ಕೆ 288000ಮೆಟ್ರಿಕ್ ಟನ್‍ಗಳಷ್ಟು ಅಲ್ಯುಮಿನಿಯಂ ಕರಗಿಸುವ ಸ್ಥಾವರವಿದೆ. ವರ್ಷಕ್ಕೆ 345000ಮೆಟ್ರಿಕ್ ಟನ್‍ಗಳಷ್ಟಾಗುತ್ತದೆ. 

	ಭಾರತ ಅಲ್ಯುಮಿನಿಯಂ ಕಂಪೆನಿ (ಬಾಲ್ಕೊ) 1965ರಲ್ಲಿ ಸಾರ್ವಜನಿಕ ಕ್ಷೇತ್ರ ಉದ್ದಿಮೆಯಾಗಿ ಸ್ಥಾಪನೆಗೊಂಡಿತು. ಈ ಕಂಪೆನಿ ಮಧ್ಯಪ್ರದೇಶದಲ್ಲಿ ಕೊರ್ಬಾಅಲ್ಯುಮಿನಿಯಂ ಸಂಕೀರ್ಣವನ್ನು ನಡೆಸುತ್ತಿದೆ. ಪಶ್ಚಿಮಬಂಗಾಳದ ಅಸಿನ್ಯಾಲ್‍ನಲ್ಲಿ ಬಿಧನ್‍ಬಾಗ್ ಘಟಕಉಳ್ಳದ್ದಾಗಿದೆ. ಕೊರ್ಬಾ ಸಂಕೀರ್ಣ ವರ್ಷಕ್ಕೆ ಎರಡುಲಕ್ಷ ಟನ್‍ಗಳಷ್ಟು ಅಲ್ಯೂಮಿನಾ ಉತ್ಪಾದಿಸುವ ಅನುಕೂಲಉಳ್ಳದ್ದಾಗಿದೆ. ಮಾರಾಟ ಮಾಡಬಲ್ಲ ಅಲ್ಯುಮಿನಿಯಂ ಲೋಹ ಇಲ್ಲಿ ವರ್ಷಕ್ಕೆ ಒಂದು ಲಕ್ಷಟನ್‍ಗಳಷ್ಟು ಉತ್ಪಾದನೆಯಾಗುತ್ತದೆ. 

	ಕ್ರಿ.ಶ.2010ರ ವೇಳೆಗೆ ಭಾರತದಲ್ಲಿ ಈಗಿರುವ ಉತ್ಪಾದನೆ ಪ್ರಮಾಣವನ್ನು ದ್ವಿಗುಣಗೊಳಿಸುವ ಸಾಧ್ಯತೆ ಇದೆ. 

(ಪರಿಷ್ಕರಣೆ: ಬಿ.ಜಿ.ರಮೇಶ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ